ಅವಲೋಕನ

ಭದ್ರಾ ಮೇಲ್ದಂಡೆ ಯೋಜನೆಯು ಮಧ್ಯ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪ್ರಮುಖ ಏತ ನೀರಾವರಿ ಯೋಜನೆಯಾಗಿರುತ್ತದೆ. ಈ ಯೋಜನೆಯಡಿ ಮೊದಲಿನ ಹಂತದಲ್ಲಿ ಕೃಷ್ಣಾ ಜಲಾನಯನ ಪ್ರದೇಶದ ತುಂಗಭದ್ರಾ ಉಪ ಜಲಾನಯನದ ಪ್ರದೇಶದಲ್ಲಿನ ತುಂಗಾ ನದಿಯಿಂದ ನೀರನ್ನು ಎತ್ತಿ ಭದ್ರಾ ಜಲಾಶಯಕ್ಕೆ ಬಿಡುವುದು ಹಾಗೂ ಎರಡನೇ ಹಂತದಲ್ಲಿ ಭದ್ರಾ ಜಲಾಶಯದಿಂದ ನೀರನ್ನು ಎತ್ತಿ ಗುರುತ್ವ ಕಾಲುವೆ ಮುಖಾಂತರ ಅಜ್ಜಂಪುರದ ಸುರಂಗದವರೆಗೆ ನೀರನ್ನು ಹರಿಸಿ ನಂತರ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಯಂತಹ ಬರಪೀಡಿತ ಜಿಲ್ಲೆಗಳಿಗೆ ಒಟ್ಟಾರೆ 2,25,515 ಹೆಕ್ಟೆರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸಲು ಹಾಗೂ ಈ ಜಿಲ್ಲೆಗಳಲ್ಲಿನ ಬರಪೀಡಿತ ತಾಲ್ಲೂಕುಗಳ 367 ಕೆರೆಗಳಿಗೆ ನೀರನ್ನು ತುಂಬಿಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯ ಪ್ರಾಥಮಿಕ ಉದ್ಧೇಶ ಮುಂಗಾರು ಋತುವಿನಲ್ಲಿ ಸುಸ್ಥಿರ ನೀರಾವರಿಯನ್ನು ಕಲ್ಪಿಸುವುದು ಹಾಗೂ ಅಂತರ್ಜಲ ಅಭಿವೃದ್ಧಿಪಡಿಸಿ ಅದರಲ್ಲಿನ ಪ್ರಧಾನವಾದ ಮತ್ತು ಹೆಚ್ಚಿನ ರಾಸಾಯನಿಕ ಕಲುಷಿತೆವಾದ ಪ್ಲೋರೈಡ್ ಅಂಶವನ್ನು ಕಡಿಮೆಗೊಳಿಸುವುದು ಹಾಗೂ ಮೇಲೆ ತಿಳಿಸಿರುವ ಜಿಲ್ಲೆಗಳಲ್ಲಿನ ಬರಪೀಡಿತ ತಾಲ್ಲೂಕುಗಳಲ್ಲಿ 367 ಕೆರೆಗಳನ್ನು ತುಂಬಿಸಿ, ಕುಡಿಯುವ ನೀರನ್ನು ಒದಗಿಸುವುದಾಗಿರುತ್ತದೆ.

ಯೋಜನೆಯ ಗುರಿ ಹಾಗೂ ಕಾಮಗಾರಿಯ ವಿವರಗಳು

ಮಧ್ಯ ಕರ್ನಾಟಕ ಬರಪೀಡಿತ ಪ್ರದೇಶಗಳಿಗೆ ನೀರಾವರಿಯನ್ನು ಹಾಗೂ ಕುಡಿಯುವ ನೀರನ್ನು ಕಲ್ಪಿಸುವುದು ಈ ಸಮಗ್ರ ಯೋಜನೆಯ ಉದ್ಧೇಶವಾಗಿದ್ದು, ಕೆಳಕಂಡ ನಿರ್ದಿಷ್ಟ ಕಾಮಗಾರಿಗಳು ಇರುತ್ತವೆ,

 • ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ತಾಲ್ಲೂಕುಗಳು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕುಗಳು, ದಾವಣಗೆರೆ ಜಿಲ್ಲೆಯ ಸಿರಾ ಹಾಗೂ ಚಿಕ್ಕನಾಯ್ಕನಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 2,25,515 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಇದಕ್ಕೆ ಒಟ್ಟು 539.07 (ಎಂಸಿಎಂ) (19.04 ಟಿ.ಎಂ.ಸಿ) ನೀರಿನ ಅವಶ್ಯಕತೆ ಇರುತ್ತದೆ..
 • 367 ಕೆರೆಗಳಿಗೆ ಅವುಗಳ ಸಾಮಥ್ರ್ಯದ ಶೇಕಡ 50% ರಷ್ಟು ತುಂಬಿಸಲು ಉದ್ಧೇಶಿಸಿದ್ದು, ಇದಕ್ಕೆ ಬೇಕಾಗುವ ನೀರಿನ ಪ್ರಮಾಣವು 307.48 ಎಂಸಿಎಂ (10.86 ಟಿಎಂಸಿ) ಇದ್ದು, ಇದರಲ್ಲಿ ವಾಣಿ ವಿಲಾಸ ಸಾಗರಕ್ಕೆ ನೀರು ಒದಗಿಸುವ 2.00 ಟಿಎಂಸಿ ನೀರಿನ ಪ್ರಮಾಣವು ಸೇರಿರುತ್ತದೆ. ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಅಭಿವೃದ್ಧಿಪಡಿಸುವುದಲ್ಲದೇ, ಅದರಲ್ಲಿನ ರಾಸಾಯನಿಕ ಕಲುಷಿತವಾದ fluoride ಅನ್ನು ಕಡಿಮೆಗೊಳಿಸುವುದಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಸೂಚಿ ನಕ್ಷೆ

ಭದ್ರಾ ಮೇಲ್ದಂಡೆ ಯೋಜನೆಯ ಸ್ಥೂಲ ನಕ್ಷೆ

ಈ ಯೋಜನೆಯು ಈ ಕೆಳಕಂಡ ಘಟಕಗಳನ್ನು ಒಳಗೊಂಡಿರುತ್ತದೆ

 • ತುಂಗ ಜಲಾಶಯದ ಹಿನ್ನೀರಿನಿಂದ 17.40 ಟಿಎಂಸಿ (492.8 ಎಂ.ಸಿ.ಎಂ) ನೀರನ್ನು ಜೂನ್ ನಿಂದ ಅಕ್ಟೋಬರ್ ವರೆಗೆ ಎತ್ತಿ ಭದ್ರಾ ಜಲಾಶಯಕ್ಕೆ ಒದಗಿಸುವುದು.
 • ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ (ರೂ.8.55 ಎಂ.ಸಿ.ಎಂ) ನೀರನ್ನು ಜೂನ್ ನಿಂದ ಅಕ್ಟೋಬರ್ ವರೆಗೆ ಎತ್ತಿ ಅಜ್ಜಂಪುರ ಬಳಿ ನಿರ್ಮಿಸಲಾಗಿರುವ ಸುರಂಗದ ಹತ್ತಿರ ಬರುವ ವಿತರಣಾ ತೊಟ್ಟಿಗೆ ಒದಗಿಸುವುದು.
 • ಅಜ್ಜಂಪುರ ಹತ್ತಿರ 6.9 ಕಿಮೀ (ಅಂದಾಜು) ಉದ್ದದ ಸುರಂಗ ನಿರ್ಮಿಸಿ, ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗೆ ನೀರು ಹರಿಸುವುದು.
 • ತರೀಕೆರೆ ತಾಲ್ಲೂಕಿನ ಬಳಿ ಬರುವ ಸುರಂಗದ ಸುತ್ತಮುತ್ತ ಮೇಲ್ಭಾಗದ 20150 ಹೇ. ಪ್ರದೇಶಕ್ಕೆ ಖರಿಫ್ ಋತುವಿನಲ್ಲಿ ಸೂಕ್ಷ್ಮ ನೀರಾವರಿ ಅಳವಡಿಸುವ ಸಲುವಾಗಿ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವುದು.
 • ಚಿತ್ರದುರ್ಗ ಶಾಖಾ ಕಾಲುವೆಯ ನಿರ್ಮಾಣ ಹಾಗೂ ಮುಂಗಾರು ಋತುವಿನಲ್ಲಿ 1,07,265 ಹೆಕ್ಟೆರ್ ಹನಿ ನೀರಾವರಿಗಾಗಿ ಮೂಲ ಸೌಕರ್ಯ ಒದಗಿಸುವುದು.
 • ತುಮಕೂರು ಶಾಖಾ ಕಾಲುವೆಯ ನಿರ್ಮಾಣ ಹಾಗೂ ಮುಂಗಾರು ಋತುವಿನಲ್ಲಿ 84,900 ಹೆಕ್ಟೆರ್ ಹನಿ ನೀರಾವರಿಗಾಗಿ ಮೂಲ ಸೌಕರ್ಯ ಒದಗಿಸುವುದು.
 • ಜಗಳೂರು ಶಾಖಾ ಕಾಲುವೆಯ ನಿರ್ಮಾಣ ಹಾಗೂ ಮುಂಗಾರು ಋತುವಿನಲ್ಲಿ 13,200 ಹೆಕ್ಟೆರ್ ಹನಿ ನೀರಾವರಿಗಾಗಿ ಮೂಲ ಸೌಕರ್ಯ ಒದಗಿಸುವುದು.
 • ಚಿತ್ರದುರ್ಗ ಶಾಖಾ ಕಾಲುವೆಯ ಅಚ್ಚುಕಟ್ಟು ಅಡಿಯಲ್ಲಿ ಬರುವ 37 ಸಂಖ್ಯೆ ಕೆರೆಗಳನ್ನು, ತುಮಕೂರು ಶಾಖಾ ಕಾಲುವೆಯ ಅಚ್ಚುಕಟ್ಟು ಅಡಿಯಲ್ಲಿ ಬರುವ 131 ಸಂಖ್ಯೆ ಕೆರೆಗಳನ್ನು, ಜಗಳೂರು ಶಾಖಾ ಕಾಲುವೆಯ ಅಚ್ಚುಕಟ್ಟು ಅಡಿಯಲ್ಲಿ ಬರುವ 07 ಸಂಖ್ಯೆ ಕೆರೆಗಳನ್ನು ಮತ್ತು ತರೀಕೆರೆ ಏತ ನೀರಾವರಿ ಹಾಗೂ ಗುರುತ್ವ ಕಾಲುವೆಯ ಅಚ್ಚುಕಟ್ಟು ಅಡಿಯಲ್ಲಿ ಬರುವ 33 ಸಂಖ್ಯೆ ಕೆರೆಗಳನ್ನು ತುಂಬಿಸುವುದು.
 • ಹೊಳಲ್ಕರೆ ತಾಲ್ಲೂಕಿನ 21 ಸಂಖ್ಯೆ ಕೆರೆಗಳನ್ನು, ಮೊಳ್ಕಾಲ್ಮೂರು ತಾಲ್ಲೂಕಿನ 20 ಸಂಖ್ಯೆ ಕೆರೆಗಳನ್ನು, ಚಳ್ಳಕೆರೆ ತಾಲ್ಲೂಕಿನ 42 ಸಂಖ್ಯೆ ಕೆರೆಗಳನ್ನು ಹಾಗೂ ತರೀಕೆರೆ ತಾಲ್ಲೂಕಿನ 46 ಸಂಖ್ಯೆ ಕೆರೆಗಳನ್ನು ತುಂಬಿಸುವುದು.
 • ಪಾವಗಡ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ 30 ಸಂಖ್ಯೆ ಕೆರೆಗಳನ್ನು ತುಂಬಿಸುವುದು.

ಮೇಲಿನ ಯೋಜನೆಗೆ ಸಂಬಂಧಿಸಿದ ಘಟಕಗಳಿಗೆ ಅಂದಾಜು ಪತ್ರಿಕೆಗಳನ್ನು ತಯಾರಿಸಲಾಗಿರುತ್ತದೆ. ಯೋಜನೆಯ ಒಟ್ಟು ಅಂದಾಜು ಮೊತ್ತವು 2012-13 ಸಾಲಿನ ಜಲಸಂಪನ್ಮೂಲ ಇಲಾಖೆಯ ದರಪಟ್ಟಿಯ ದರಗಳಾದರಿತ ರೂ.12,340 ಕೋಟಿಗಳು ಹಾಗೂ B.C. Ratio 1.263 ಆಗಿರುತ್ತದೆ.

ಯೋಜನೆಯ ಅನುಷ್ಠಾನ

ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಈ ಯೋಜನೆಯ ಪ್ರಾರಂಭಿಕ ಹಂತದ ಮೂರು ಕ್ಲಿಷ್ಟಕರವಾದ ಕಾಮಗಾರಿಗಳನ್ನು EPCಟೆಂಡರ್ ಆಧಾರದ ಮೇಲೆ ಮೂರು ಗುತ್ತಿಗೆದಾರರಿಗೆ ವಹಿಸಲಾಗುವುದಲ್ಲದೆ, ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗಳನ್ನು ಟೆಂಡರ್ ಆಧಾರದ ಮೇಲೆ ವಹಿಸಲಾಗಿರುತ್ತದೆ. ವಿವರ ಇಂತಿವೆ

ಕ್ರ.ಸಂ. ಕಾಮಗಾರಿ ಗುತ್ತಿಗೆದಾರರು ಟೆಂಡರ್ ಮೊತ್ತ
1 ಪ್ಯಾಕೇಜ್-I ಮೇ||ಎಸ್.ಇ.ಡಬ್ಲ್ಯೂ (ಜೆ.ವಿ) ಹೈದ್ರಾಬಾದ್ ರೂ.324 ಕೋಟಿ
  ತುಂಗಾ ನದಿಯಿಂದ 15 ಟಿಎಂಸಿ ನೀರನ್ನು ಎತ್ತಿ ಭದ್ರಾ ಜಲಾಶಯ ಹರಿಸುವುದು. (ಇಪಿಸಿ ಟೆಂಡರ್)  
2 ಪ್ಯಾಕೇಜ್- II ಮೇ|| ಆರ್‍ಎನ್‍ಎಸ್‍ಐಎಲ್ (ಜೆ.ವಿ) ಹುಬ್ಬಳ್ಳಿ ರೂ.1032 ಕೋಟಿ
  ಭದ್ರಾ ಜಲಾಶಯದಿಂದ 21.50 ಟಿಎಂಸಿ ನೀರನ್ನು ಎತ್ತಿ ಅಜ್ಜಂಪುರ ಬಳಿಯ ಸುರಂಗಕ್ಕೆ ಹರಿಸುವುದು. (ಇಪಿಸಿ ಟೆಂಡರ್)  
3 ಪ್ಯಾಕೇಜ್- III ಮೇ|| ಶಂಕರ ನಾರಾಯಣ ನಿರ್ಮಾಣ (ಕನ್‍ಸ್ಟ್ರಷ್ಕನ್), ಬೆಂಗಳೂರು ರೂ.223.96 ಕೋಟಿ
  ಅಜ್ಜಂಪುರ ಬಳಿ 6.9 ಕಿ.ಮೀ ಉದ್ದದ ಸುರಂಗ ನಿರ್ಮಾಣ. (ಇಪಿಸಿ ಟೆಂಡರ್)  
4 ಚಿತ್ರದುರ್ಗ ಶಾಖಾ ಕಾಲುವೆಯ ಪ್ಯಾಕೇಜ್- I ಶ್ರೀ ಉದಯ ಶಿವಕುಮಾರ್ ರೂ.36.08 ಕೋಟಿ
5 ಚಿತ್ರದುರ್ಗ ಶಾಖಾ ಕಾಲುವೆಯ ಪ್ಯಾಕೇಜ್- II ರೆಡ್ಡಿ ವೀರಣ್ಣ ನಿರ್ಮಾಣ (ಕನ್‍ಸ್ಟ್ರಷ್ಕನ್) ರೂ.98.25 ಕೋಟಿ
6 ಚಿತ್ರದುರ್ಗ ಶಾಖಾ ಕಾಲುವೆಯ ಪ್ಯಾಕೇಜ್- III ಮೇ|| ಶಂಕರ ನಾರಾಯಣ ನಿರ್ಮಾಣ (ಕನ್‍ಸ್ಟ್ರಷ್ಕನ್),ಬೆಂಗಳೂರು ರೂ.72.08 ಕೋಟಿ
  (ಸುರಂಗ ಕಾಮಗಾರಿ)    

ಭೂಸ್ವಾಧೀನ:

ಅರಣ್ಯ ಭೂಮಿ ಒಳಗೊಂಡಂತೆ, 4,480.50 ಹೇ. ಪ್ರದೇಶದ ಭೂಮಿ ಅವಶ್ಯವಿರುತ್ತದೆ. ಈ ಪೈಕಿ ಇದುವರೆಗೆ 622.17 ಹೇ. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮೊದಲನೇ ಹಂತದ 318.62 ಹೇ. ಅರಣ್ಯ ಪ್ರದೇಶವನ್ನು ಸ್ವಾಧೀನ ಪಡೆಯಲು ಕ್ರಮ ಹಾಗೂ ಎರಡನೇ ಹಂತದ ಭೂ ಸ್ವಾಧೀನ ಕಾರ್ಯವು ಕೂಡ ಜಾರಿಯಲ್ಲಿರುತ್ತದೆ.

ಆರ್ಥಿಕ ಪ್ರಗತಿ:

ದಿನಾಂಕ: 31.03.2017ರ ಅಂತ್ಯಕ್ಕೆ ಒಟ್ಟಾರೆ ವೆಚ್ಚ ರೂ.1801.44 ಕೋಟಿಗಳಾಗಿರುತ್ತದೆ.