ಅವಲೋಕನ
ಕರ್ನಾಟಕದ ಪೂರ್ವ ಭಾಗದಲ್ಲಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಅನಿಯಮಿತ ಮಳೆಯಿಂದ ಸತತವಾಗಿ ಬರ ಪೀಡಿತವಾಗಿರುತ್ತದೆ. ಸದರಿ ಜಿಲ್ಲೆಗಳಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ದೀರ್ಘಕಾಲಿಕ ನೀರಿನ ಮೂಲ ಇರದ ಕಾರಣ, ಒಂದು ಶಾಶ್ವತ ಹಾಗು ಅವಲಂಬಿತ ನೀರಿನ ಮೂಲವನ್ನು ಗುರುತಿಸಿ ಅದರಿಂದ ಖಚಿತವಾದ ಕುಡಿಯುವ ನೀರನ್ನು ಸರಬರಾಜು ಮಾಡುವುದು ಇಲ್ಲಿನ ಜನಗಳ ಬಹುದಿನದ ಬೇಡಿಕೆಯಾಗಿರುತ್ತದೆ. ಇದಲ್ಲದೆ ಅತಿಯಾದ ನೀರಿನ ಬಳಕೆಯಿಂದಾಗಿ ಈ ಭಾಗದ ಅಂತರ್ಜಲದ ಮಟ್ಟವು ಗಾಬರಿಗೊಳಿಸುವ ಆಳ ತಲುಪಿರುತ್ತದೆ. ಇದರಿಂದಾಗಿ ಈಗಾಗಲೇ ಲಭ್ಯವಿರುವ ಅಂತರ್ಜಲದಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್ ಅಂತಹ ಹಾನಿಕಾರಕ ಲವಣಗಳು ಹೆಚ್ಚಾಗಿದ್ದು ಅಂಗೀಕರಿಸದ/ಗೌಪ್ಯಯುಕ್ತ ಮಟ್ಟವನ್ನು ಮೀರಿರುತ್ತದೆ.
ಈ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ನೀರು ಲಭ್ಯವಿರುವ ಮೂಲವನ್ನು ಗುರುತಿಸಲು ಅನೇಕ ಅಧ್ಯಯನಗಳು ನಡೆದಿರುತ್ತದೆ. ಸದರಿ ಅಧ್ಯಯನಗಳ ಸಂದರ್ಭದಲ್ಲಿ ಸಕಲೇಶಪುರ ಬಳಿಯ ಪಶ್ಚಿಮ ಘಟ್ಟದ ಎತ್ತರ ಪ್ರದೇಶಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಹಾಗೂ ಹೊಂಗದಹಳ್ಳ ನದಿಗಳ ನೀರನ್ನು ಬಳಸಿಕೊಳ್ಳುವುದು ಒಂದು ಸೂಕ್ತ ಪ್ರಸ್ತಾವನೆಯಾಗಿರುತ್ತದೆ. ಮುಂಗಾರಿನ ಋತುವಿನಲ್ಲಿ (ಜೂನ್ನಿಂದ ಅಕ್ಟೋಬರ್) 24.01 ಟಿಎಂಸಿ ನೀರನ್ನು ಈ ಹಳ್ಳ/ನದಿಗಳಿಂದ ತಿರುಗಿಸಿ ಬಳಸಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಸದರಿ ಪ್ರಸ್ತಾವನೆಯಲ್ಲಿ 8 ವಿಯರ್ ಗಳನ್ನು ನಿರ್ಮಿಸಿ ಅದರಿಂದ ಉಂಟಾಗುವ ಹೆಚ್ಚುವರಿ ಹರಿವನ್ನು ತಿರುಗಿಸಲು ಹಾಗೂ ವಿಯರ್ ನಿರ್ಮಾಣದಿಂದ ಆಗುವ ಮುಳುಗಡೆಯನ್ನು ತಡೆಯಲು ವಿಯರ್ ಗಳ ಎತ್ತರವನ್ನು ನಿರ್ಬಂಧಿಸಲು ಯೋಜಿಸಲಾಗಿದೆ
ಸರ್ಕಾರದ ಆದೇಶ ಸಂಖ್ಯೆ: ಜ.ಸಂ.ಇ 203 ವಿ.ಬ್ಯಾ.ಇ 2012, ಬೆಂಗಳೂರು, ದಿನಾಂಕ: 17.02.2014 ರಲ್ಲಿ ರೂ.12,912.36 ಕೋಟಿಗಳಿಗೆ (2012-13 ದರಪಟ್ಟಿ) ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ವಿವರ ಕೆಳಗಿನಂತಿದೆ:
- ಹಂತ 1: ಲಿಫ್ಟ್ ಘಟಕಗಳು- ರೂ.3527.17 ಕೋಟಿಗಳು
- ಹಂತ 2: ವಿತರಣಾ ಘಟಕಗಳು – ರೂ.9385.17 ಕೋಟಿಗಳು
ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೀರಿನ ಅವಶ್ಯವಿರುವ ಹಾಸನ, ರಾಮನಗರ, ಚಿಕ್ಕಮಗಳೂರು , ಬೆಂಗಳೂರಿನ ಕೆಲ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವುದು ಪ್ರಸ್ತುತ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ. ಇದಲ್ಲದೇ ಈ ಮಾರ್ಗದಲ್ಲಿನ 527 ಸಂಖ್ಯೆ MI ಕೆರೆಗಳ ಸಾಮಥ್ರ್ಯದ 50% ರಷ್ಟು ತುಂಬಿಸುವ ಹಾಗು ಅಂತರ್ಜಲ ಅಭಿವೃದ್ಧಿ ಪಡಿಸಿ ಅದರಲ್ಲಿನ ರಾಸಾಯನಿಕ ಕಲುಷಿತಗಳನ್ನು ಅದರಲ್ಲೂ ಫ್ಲೋರೈಡ್ ಅನ್ನು ಮಿತಿಗೊಳಿಸುವುದು ಸಹಾ ಪ್ರಮುಖವಾಗಿರುತ್ತದೆ.